ವಿಚಿತ್ರ ಅಲ್ವಾ?
(ಸಿನ್ಸಿನಾಟಿ ಏರ್ ಪೋರ್ಟ್ ಅಲ್ಲಿ ಕುಳಿತಿದ್ದಾಗ ಬರೆದದ್ದು)
ಸುಮಾರು ನಾಕೈದು ದಿನದಿಂದ ಇಂಡಿಯಾಗೆ ಹೋಗ್ತೀನಿ ಅಂತ ತುಂಬಾ ಖುಷಿಯಾಗಿದ್ದೆ. ಭಾನುವಾರ ಯಾವಾಗ ಬರುತ್ತೋ ಅಂತ ಕಾಯ್ತಿದ್ದೆ. ವಾಪಸ್ ಹೋದ ಮೇಲೆ ಏನೇನು ತಿನ್ಬೇಕು - ಮನೇಲಿ ಈರುಳ್ಳಿ ಚಿತ್ರಾನ್ನ, ಅಕ್ಕಿ ರೊಟ್ಟಿ ಜೊತೆ ಟೊಮ್ಯಾಟೋ ಗೊಜ್ಜು, ಆಲೂಗೆಡ್ಡೆ ಸಾರನ್ನದ ಜೊತೆ ಪೇಣಿ ಸಂಡಿಗೆ! ಕುವೆಂಪುನಗರದ ಲಾಸ್ಟ್ ಸ್ಟಾಪ್ ಹತ್ರದ ಕಾಪರ್ ಚಿಮ್ನಿ, ಮಳ್ಳೂ ಅಂಗ್ಡೀಲಿ ಮ್ಯಾಂಗೋ ಮಿಲ್ಕ್ ಶೇಕ್...ಹಿಂಗೆ ನಡೆದಿತ್ತು ನನ್ನ ಮುಂದಾಲೋಚನೆ!
ಆದರೆ ಯಾಕೋ ಗೊತ್ತಿಲ್ಲ, ಹೊರಡೋ ಹಿಂದಿನ ದಿನ ಒಂಥರಾ ಬೇಜಾರಿತ್ತು. ಕ್ಲಾಸೆಟ್ಟಿಂದ ಬಟ್ಟೆ ಎಲ್ಲಾ ತೆಗೆದು ಪ್ಯಾಕ್ ಮಾಡಿದ ಮೇಲೆ ಖಾಲಿಖಾಲಿ ಅನ್ಸಿದ್ದು ಕ್ಲಾಸೆಟ್ಟಾ ಅಥವಾ ನಾನಾ ಅಂತ ಗೊತ್ತಾಗ್ಲಿಲ್ಲ. ನಂಗೇ ಗೊತ್ತಿಲ್ದೇ ನನ್ನ ರೊಟೀನಿನ ಭಾಗವಾಗಿದ್ದ ವಸಾಚ್ ಪರ್ವತ, ಹಿಮ, ಒಣಗಿದ ಮರಗಳು - ಎಲ್ಲಾ ಮಿಸ್ ಮಾಡ್ಕೊತೀನಲ್ಲ ಅನ್ಸಕ್ಕೆ ಶುರು ಆಯ್ತು. ಹಿಂಗೇ ಇಡೀ ದಿನ ಮನಸ್ಸು ಖುಷಿ ಮತ್ತು ಬೇಜಾರಿನ ಕೆಟ್ಟ ಕಾಂಬಿನೇಷನ್ನಲ್ಲಿ ಇತ್ತು.
ನಂಗೊತ್ತು ಮನಸ್ಸು ತುಂಬಾ ಟ್ರಿಕ್ಕಿ! ಇವತ್ತು ನಾನು ಮಾನಸಿಕವಾಗಿ ಅಮೆರಿಕಾದಲ್ಲಿ ಇಲ್ಲ. ಆದರೆ ಇನ್ನೂ ಇಂಡಿಯಾ ತಲುಪಿಲ್ಲ. ಒಂಥರಾ ತ್ರಿಶಂಕು ಪರಿಸ್ಥಿತಿ ಇದು. ಭಾನುವಾರ ಮನೆಗೆ ಹೋದ ಮೇಲೆ ಏನಿದ್ರೂ ಸಖ್ಖತ್ ನಿದ್ದೆ ಮತ್ತು ಭರ್ಜರಿ ಊಟ. ಆಗ ಈ ಹಿಮ, ಪರ್ವತ, ಒಣಗಿದ ಮರ - ಯಾವ್ದೂ ಮುಖ್ಯ ಅನ್ಸಲ್ಲ - ಅವು ಏನಿದ್ರೂ ನೆನಪಿನ ಯಾವುದೋ ಒಂದು ಮೂಲೆಯ ಭಾಗ ಆಗ್ಬಿಡುತ್ತೆ ಅಷ್ಟೆ. ಮನಸ್ಸು ಎಷ್ಟು ವಿಚಿತ್ರ ಅಲ್ವಾ?

0 Comments:
Post a Comment
<< Home